Wednesday, July 3, 2013

ಅನುಭವದ ಮಿಥ್ಯದಡಿ ...



ಸಂಶೋಧನೆಯ ಕೆಲಸಕ್ಕೆ
ತಿಲಾಂಜಲಿಯಿತ್ತು ವರ್ಷವಾಗಿರೆ
ನೋಟಗಳೆಲ್ಲವು ದಿಟ್ಟಿಸಿವೆ
ಪ್ರಶ್ನಾರ್ಥಕ ಮುದ್ರೆಹೊತ್ತು
ಮುಂದಿನ ನಿಲುವನರಿಯಲು

ವಯಸ್ಸು ಮದುವೆಗೆ ಸನಿಹ
ನೌಕರಿಯ ನೆಲೆಯಿಲ್ಲದ ಮಗ
ಹೆತ್ತವರಿಗೆ ವಂಶದ ಕಳಕಳಿ
ಎಲ್ಲವನ್ನು ಪುನರಾರಂಭಿಸುವ
ಕನಸೇ ಅವನಿಗಿಲ್ಲಿ ಬಳುವಳಿ

ಭವಿಷ್ಯದ ಗಾಬರಿಗಳ ಊಹಿಸಿ
ದುಡಿಮೆಗಿಳಿದಿರಲು ಮನುಜ
ಕಾಯಕವನ್ನೇಕೆ ಪ್ರೀತಿಸುತ್ತಾನೆ
ಬದುಕುವುದೊಂದನ್ನು ಬಿಟ್ಟು
ಸಮಾಜ ಕಲಿಸಿರಲು ಎಲ್ಲ

ಅಂಟದ ವಿದ್ಯೆಯ ನಾಟುತ್ತಾರೆ
ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ
ನೈಜ ಪ್ರತಿಭೆಗೆಲ್ಲಿದೆ ಉಳಿಗಾಲ
ನಿರೀಕ್ಷೆಯ ಕತ್ತಿಗೆ ತಲೆಯೊಡ್ಡುವ
ವಿದ್ಯಾರ್ಥಿ, ಹರಕೆಯ ಕುರಿ

ವಾಸ್ತವದ ಹೊಲಸಿನೆಡೆಗೆ
ಪ್ರಜ್ಞಾಪೂರ್ವಕ ಅವಜ್ಞತೆ
ಅನಿವಾರ್ಯತೆಯ ಬದುಕಿನಲಿ
ಪರಿಪಾಲಿಸದ ಸಾತ್ವಿಕತೆಯು
ಪಾಠಗಳಾಗಿ ಪುಸ್ತಕದೊಳಗೆ

ಹೆಗಲೇರಿದ ಗೊಂದಲಗಳನೆಲ್ಲಾ
ಬಗೆಹರಿಸುವ ವ್ಯಸನದಲ್ಲೇ
ಆತ್ಮಸಾಕ್ಷಿಯು ಚಿತೆಯೇರಿದೆ
ಅನುಭವದ ಮಿಥ್ಯದಡಿ ಉಳಿಸಿ
ಸಂತತಿಗೆ ಮತ್ತದೇ ಚಿಂತೆ

ಜಂಗಮವಾಣಿ ಮೊಳಗುತ್ತಿರೆ
ಆತ್ಮೀಯರ ಧ್ವನಿ ಕೇಳುತ್ತಿದೆ
ನೀತಿಮಾತುಗಳ ಮುಂಗಾರಿನಲ್ಲಿ
ನಾನಿನ್ನು ಖಾಲಿಯಾಗಿಲ್ಲವೆಂದು
ಮನಸ್ಸಿದೋ ಪಿಸುಗುಡುತ್ತಿದೆ

ಪ್ರಯೋಗಗಳಿಗೆ ಆಸ್ಪದವಿರದ
ಹಿರಿಯರ ಮೌಢ್ಯಾಚಾರಗಳ
ಧಿಕ್ಕರಿಸುವ ನಿರ್ಧಾರಕ್ಕಿಳಿಯೆ
ಹೊಸತರೆಡೆಗೆ ತುಡಿಯುವ
ಚೈತನ್ಯಕಿನಿತು ನೀರುಣಿಸುತ



  -  ಪ್ರಮೋದ್ ಶ್ರೀನಿವಾಸ

5 comments:

  1. ವಾಹ್! ವಾಸ್ತವಕ್ಕೆ ತುಂಬಾ ಹತ್ತಿರವಾದ ಕವನ... ತುಂಬಾ ಚೆನ್ನಾಗಿದೆ ಪ್ರಮೋದ್ ಯುವ ಮನಸ್ಸಿನ ತುಮುಲ ಗೊಂದಲಗಳು ಚೆನ್ನಾಗಿ ಪ್ರತಿಬಿಂಬಿತವಾಗಿವೆ

    ReplyDelete
  2. What a comeback... Itz a Gowdru Style Poem!! On a serious note, ಕವನ ತು೦ಬಾ ಚೆನ್ನಾಗಿದೆ ಪ್ರಮೋದ್, ವಾಸ್ತವ, ಹಳೆ ತಲೆಮಾರುಗಳ ವಿಚಾರವ೦ತಿಕೆ, ಹೊಸದೇನೋ ಮಾಡಬೇಕೆನ್ನುವ ಯುವ ಪೀಳಿಗೆಯ ತುಡಿತಗಳು!!! "ನಮಗೇನು ಮಾಡಬೇಕನಿಸಿದೆಯೋ ಅದನ್ನ ಮಾಡೋಕೆ ಬಿಡಿ" ಅ೦ತ ಹೇಳುತಿದೆ ಕವಿಮನಸು.... gud1, gud1....

    ReplyDelete
  3. En maga athma kathana bariyakke time illdeno athava baradare odokke namage time illa antha athma kavithe bardidya... Surely topic of discussions of our recent meetings ... battle between survival n happiness... ethics n recognition... to love or to be loved... good one as I say keep writing in kannada... wander in different shades n words in kannada

    ReplyDelete
  4. 'ಅಂಟದ ವಿದ್ಯೆಯ ನಾಟುತ್ತಾರೆ
    ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ'
    ಸರಿಯಾದ ಮಾತು ಪ್ರಮೋದ್ ಭೈ,
    ಕವನದ ಕಡೆಯ ಸಾಲು ಚೈತನ್ಯ ಪೂರ್ಣ.

    ReplyDelete